ಸಾಲ ಮನ್ನಾ ಎಂಬ ವ್ಯರ್ಥಾಲಾಪದ ಸುತ್ತಾ…!

ದು ಸಮ್ಮಿಶ್ರ ಸರ್ಕಾರ…! ಕಾಂಗ್ರೆಸ್ ನೊಂದಿಗೆ ಸಮಾಲೋಚನೆ ಮಾಡಿ, ಸಾಲ ಮನ್ನಾ ಮಾಡೋ ತಿರ್ಮಾನ ತೆಗೆದುಕೊಳ್ತೀವಿ. ರೈತರ ಖಾಸಗಿ ಸಾಲವನ್ನೂ ತೀರಿಸೋಕೆ ನಾವು ಬದ್ಧರಾಗಿದೀವಿ. ಆದ್ರೆ ಅದಕ್ಕೆ ಕಾಂಗ್ರೆಸ್ ಸಹವರ್ತಿಗಳ ಸಮ್ಮತಿ ಬೇಕು.” ಹಾಗಂತಾ ನೂತನ ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿದ ಕೂಡಲೇ, ರೈತರ ಮುಖದಲ್ಲಿ ನಿರಾಸೆಯ ಕಾರ್ಮೋಡ.. ರೈತ ನಾಯಕರ ಮುಖದಲ್ಲಿ ಆಕ್ರೋಶದ ಅಲೆ, ಬಿಜೆಪಿ ನಾಯಕರ ಮುಖದಲ್ಲಿ ಹೋರಾಟಕ್ಕೊಂದು ವಿಷಯಾ ಸಿಗ್ತು ಅನ್ನೋ ಸಂತೋಷ.. ಕಾಂಗ್ರೆಸ್ ಪಕ್ಷದ ಕೆಲ ಅನನುಭವಿ ನಾಯಕರ ಮನಸ್ಸಲ್ಲಿ ಕುಮಾರ ಸ್ವಾಮಿ ಮೈತ್ರಿಗೆ ಎಷ್ಟೊಂದು ಬದ್ಧರಾಗಿದ್ದಾರೆ ಅನ್ನೋ ನೆಮ್ಮದಿ…! ಅದೊಂದು ಹೇಳಿಕೆ ಅದೆಷ್ಟು ಮಂದಿಯ ಮನಸ್ಸಲ್ಲಿ ಅದೆಂತೆಂಥಾ ಭಾವನೆಗಳನ್ನ ಹುಟ್ಟು ಹಾಕಿತ್ತೊ ಆದ್ರೆ, ಪದ್ಮ ನಾಭ ನಗರದ ಮನೆಯಲ್ಲಿ ಕುಳಿತಿದ್ದ ಆ ರಾಜಕೀಯ ಭೀಷ್ಮ ಇದೆಲ್ಲವನ್ನೂ ನೋಡಿ ಮನಸ್ಸಲ್ಲೇ ಅದೆಷ್ಟು ಸಂತೋಷ ಪಟ್ಟಿದ್ರೊ..

ಅದಿರಲಿ, ಈಗ ಈ ಸಾಲ ಮನ್ನಾ ರಾಜ ಕಾರಣದ ವಿಷಯಕ್ಕೆ ಬರೋಣ. ಕರ್ನಾಟಕದಲ್ಲಿ ಈ ಸಂಪೂರ್ಣ ಸಾಲಮನ್ನಾ ಅನ್ನೋದನ್ನ ಶುರು ಮಾಡಿದ್ದು ಅಂದಿನ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರ..  ಅಲ್ಲಿವರೆಗೆ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ ಅಸಲನ್ನ ಕಟ್ಟಿಸಿಕೊಳ್ಳೋ ಅಭ್ಯಾಸ ಇತ್ತು.. ಆದ್ರೆ, ಒಂದು ಬಾರಿ ಸರ್ಕಾರ 25 ಸಾವಿರ ರೂಪಾಯಿಗಳ ವರೆಗಿನ ರೈತರ ಸಾಲವನ್ನ  ಸಂಪೂರ್ಣವಾಗಿ ಮನ್ನಾ ಮಾಡಿ, ರೈತರ ನೆರವಿಗೆ ನಾವಿದ್ದೇವೆ ಅಂತಾ  ಭರವಸೆ ಹುಟ್ಟಿಸಿದ್ದು ಮಾತ್ರ ಜೆಡಿಎಸ್-ಬಿಜೆಪಿ ಸಮ್ಮಿಶ್ರ  ಸರ್ಕಾರ.

ರೈತರ ಸಾಲ ಮನ್ನಾ ಅನ್ನೋ ವಿಷಯ ಬಂದಾಗ ಅಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಸಾಲ ಮನ್ನಾ ಮಾಡೋದ್ರಿಂದಾ ನಿಜವಾದ ರೈತನಿಗೆ ಯಾವ ಅನುಕೂಲಾನೂ ಆಗೋದಿಲ್ಲಾ ಅನ್ನೋದ್ರಿಂದಾ ಹಿಡಿದು, ರೈತರಲ್ಲಿ ಸಾಲ ತಗೊಂಡು ಸುಮ್ಮನಾಗೋ ಮನಸ್ಥಿತಿಯನ್ನ ಸರ್ಕಾರನೇ ಬೆಳೆಸ್ತಿದೆ ಅನ್ನೋವರೆಗೆ ತರಾವರಿ ಥಿಯರಿಗಳು ಜಾರಿಯಲ್ಲಿವೆ.

ಆದ್ರೆ ಭಾರತದಂಥಾ ದೇಶದಲ್ಲಿ ಸಾಲಮನ್ನಾ ಅನ್ನೋ ಸ್ಕೀಂ ಅದೆಷ್ಟರ ಮಟ್ಟಿಗೆ ರೈತರಿಗೆ ಅನುಕೂಲಕರ ಅನ್ನೋದನ್ನ ನಾವು ಅರ್ಥಮಾಡಿಕೊಳ್ಳಬೇಕು ಅಂದ್ರೆ, ನಮಗೆ ಇಲ್ಲಿನ ‘ಅಗ್ರಾನಮಿ’ ಅರ್ಥವಾಗಬೇಕು. ಕೃಷಿ ಅರ್ಥ ವ್ಯವಸ್ಥೆಯನ್ನ ನಾವು ಅರ್ಥ ಮಾಡಿಕೊಳ್ಳದೇ ಇದ್ರೆ, ಸಾಲ ಮನ್ನಾ ಬೇಕಾ ಬೇಡವಾ ಅನ್ನೋದು ನಮಗೆ ಅರ್ಥವಾಗದೇ ದೂರ ಉಳಿದು ಬಿಡತ್ತೆ.

ಭಾರತದ ಅದರಲ್ಲೂ ಕರ್ನಾಟಕದ ಹಳ್ಳಿಗಳಿಗೆ ನಾವು ಹೋದ್ರೆ, ಅಲ್ಲಿ ಇವತ್ತಿಗೂ ಸಾಲ ಪಡೆಯ ಬಲ್ಲ ರೈತರ ಸಂಖ್ಯೆ ತೀರಾ ಕಡಿಮೆ. ಅದರಲ್ಲೂ  ಸಣ್ಣ ಮತ್ತು ಅತಿಸಣ್ಣ ಕೃಷಿಕರಿಗಂತೂ ಸಾಲ ಸಿಗೋದು ದುರ್ಲಭಾನೇ.. ಯಾಕೇ ಅಂದ್ರೆ, ಇವತ್ತಿಗೂ ನಮ್ಮ ಹಳ್ಳಿಗಳಲ್ಲಿನ ಶೇಕಡಾ 60 ರಷ್ಟು ರೈತರ ಜಮೀನುಗಳು ಪೋಡಿ ಆಗಿಲ್ಲ.. ರೈತರ ಹೆಸರಲ್ಲಿ ಭೂ ದಾಖಲೆಗಳಿಲ್ಲ.. ಪಿತ್ರಾರ್ಜಿತ ಆಸ್ತಿ ವರ್ಗಾವಣೆಯಾಗದೇ ಉಳಿದುಕೊಂಡಿದೆ. ಅದನ್ನ ಸರಿ ಮಾಡೋದಕ್ಕೆ, ಆಸ್ತಿ ದಾಖಲೆಗಳನ್ನ ಮಾಡಿಕೊಳ್ಳೊದಕ್ಕೆ ನಮ್ಮ ರೈತರಿಗೆ ಸಾಕಷ್ಟು ತಿಳುವಳಿಕೆ ಇಲ್ಲಾ.. ಅಕಸ್ಮಾತ್ ಅದಿದ್ರೂ ಸರ್ಕಾರೀ ಕಛೇರಿಗಳ ಅದರಲ್ಲೂ ನಮ್ಮ ರೆವಿನ್ಯೂ ಇಲಾಖೆಯ ಅಧಿಕಾರಿಗಲಿಂದಾ ಕೆಲಸ ಮಾಡಿಸಿಕೊಳ್ಳೊ ಶಕ್ತಿ ಮತ್ತು ಜಾಣ್ಮೆ ಸಾಕಷ್ಟು ಸಾಮಾನ್ಯ ರೈತರಿಗಿಲ್ಲ..

ನಿಮಗೆ ಗೊತ್ತಿರಲಿ, ಇವತ್ತು ಪಿತ್ರಾರ್ಜಿತ ಆಸ್ತಿಯ ಪವತಿ ಖಾತೆ ಅಂದ್ರೆ, ಆಸ್ತಿಯ ಮಾಲಿಕ ದಿವಂಗತನಾದ ನಂತರ ಅವನ ಮಗ ಅಥವಾ ಮಗಳ ಹೆಸರಿಗೆ ಅದನ್ನ ವರ್ಗಾವಣೆ ಮಾಡಿಕೊಳ್ಳೋದಕ್ಕೇ ಕನಿಷ್ಟ ಅಂದ್ರೆ ಹತ್ತರಿಂದ ಹದಿನೈದು ಸಾವಿರ ರೂಪಾಯಿ ‘ಪಿಂಡ ಪ್ರದಾನ’ ಮಾಡಬೇಕು. ಈ ಶಕ್ತಿ ನಮ್ಮ ಅದೆಷ್ಟು ಸಣ್ಣ ರೈತರಿಗಿದೆ.

ಹೀಗೆ ಆಸ್ತಿ ವರ್ಗಾವಣೆ ಆಗದೇ ಇದ್ರೆ, ಬ್ಯಾಂಕು  ಸತ್ತು ಹೋದವರ ಹೆಸರಲ್ಲಿ ಸಾಲಕೊಡೋದಿಲ್ಲ.. ಹೆಸರಲ್ಲಿಲ್ಲದ ಆಸ್ತಿ ಅದೆಷ್ಟಿದ್ರೂ ಅದು ಹಣವಾಗಿ ಬದಲಾಗೋದಿಲ್ಲ.. ಇಂತವರಿಗೆ ಹೇಗೆ ಸಿಗತ್ತೆ ಸಾಲ..?

ಇನ್ನು ಎರಡನೇ ವರ್ಗ ಅಂದ್ರೆ, ಕೃಷಿ ಭೂಮಿಯೇ ಇಲ್ಲದ ಕೃಷಿ ಕಾರ್ಮಿಕರು. ನಾನು ಅಗ್ರಾನಮಿ ಅರ್ಥವಾಗಬೇಕು ಅಂದಿದ್ದು ಇದಕ್ಕೇನೇ.. ಇವತ್ತು ಹಳ್ಳಿಗಳಲ್ಲಿ ಬೇರೆಯವರ ಜಮೀನಿನಲ್ಲಿ ಕೃಷಿ ಮಾಡೋ ರೈತರು ಸುಮಾರು ಶೇಕಡ 25 ರಷ್ಟಿದಾರೆ. ಹಾಗೆ ಮಾಡೋ ಕೃಷಿಯನ್ನ ಪಾಲು, ಕೋರು ಕವಲು, ವಕ್ಕಲು.. ಹೀಗೆ ನಾನಾ ಹೆಸರುಗಳಿಂದಾ ಕರೀತಾರೆ. ಇದೊಂಥರಾ ಲೀಸ್ ನಲ್ಲಿ ಜಮೀನು ಪಡೆದು ಕೃಷಿ ಮಾಡಿ, ಬಂದ ಬೆಳೆಯಲ್ಲಿ ಜಮೀನಿನ ಮಾಲೀಕನಿಗೂ ಕೊಟ್ಟು ತಾವೂ ಪಡೆಯುವ ಪದ್ಧತಿ. ಇಂಥಾ ರೈತ ಕಾರ್ಮಿಕರ ಹೆಸರಲ್ಲಿ ಜಮೀನು ಇರಲಿ,ಮೂರಡಿ ಆರಡಿ ಜಾಗಾನು ಇರೋದಿಲ್ಲಾ.. ಇವರೂ ಸಾಲ ಮಾಡಿರ್ತಾರೆ. ಹಣ ತಂದು ಕೃಷಿಯ ಮೇಲೆ ಹಾಕಿರ್ತಾರೆ.. ಇವರು ಹೆಂಡತಿಯ ತಾಳಿ ಅಡಿಟ್ಟು ಸಾಲ ತರಬೇಕೇ ಹೊರತು ಯಾವ ಬ್ಯಾಂಕೂ ಇವರಿಗೆ ಕೃಷಿ ಸಾಲ ಕೊಡೋದಿಲ್ಲಾ..

ಹಾಗಾದ್ರೆ, ಜಮೀನೇ ಇಲ್ಲದವರು ಶೇ,25 ಮತ್ತು ಜಮೀನಿದ್ದೂ ದಾಖಲೆಗಳಿಲ್ಲದವರು ಶೇಕಡ 60 ಆದ್ರೆ, ಇನ್ನುಳಿದವರು ಶೇ.15 ರಷ್ಟು ಕೃಷಿಕರು. ಇವರುಲ್ಲಿ ದೊಡ್ಡ ಹಿಡುವಳಿಗಾರರಿರ್ತಾರೆ. ಸಣ್ಣ ರೈತರೂ ಇರ್ತಾರೆ. ಸಾಲ ಸಿಗೋದು ಇವರಿಗೆ. ಬ್ಯಾಂಕುಗಳಲ್ಲಿ ಬಹುತೇಕ ಸಾಲ ತಗೊಂಡಿರೋರು ದೊಡ್ಡ ಹಿಡುವಳಿದಾರರು.

ಈ ಸಾಲ ಮನ್ನಾ ಅನ್ನೋದು ನಮಗೆ ಹೊಸದೇನಲ್ಲಾ. ಕೇಂದ್ರದಲ್ಲಿ ಆಡಳಿತ ನಡೆಸಿದ್ದ ಯುಪಿಎ ಸರ್ಕಾರ ಎರಡನೇ ಅವಧಿಯ ಚುನಾವಣೆ ಸಂದರ್ಭದಲ್ಲಿ ಸಾಲ ಮನ್ನಾ ಘೋಷನೆ ಮಾಡಿತ್ತು. ಅವತ್ತು ಸರ್ಕಾರ ಮನ್ನಾ ಮಾಡಿದ್ದು ಸುಮಾರು 60 ಸಾವಿರ ಕೊಟಿ ಸಾಲ. ಅದು ದೇಶಾದ್ಯಂತ ಮನ್ನಾ ಮಾಡಿದ ಸಾಲದ ಮೊತ್ತ. ಆದ್ರೆ, ಮೊನ್ನೆ ಮೊನ್ನೆ, ಉತ್ತರ ಪ್ರದೇಶ ಸರ್ಕಾರ 36 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿತ್ತು. ಕರ್ನಾಟಕ ಸರ್ಕಾರ ಸಹಕಾರಿ ಬ್ಯಾಂಕುಗಳ ಸಾಲ 8167 ಕೋಟಿ ರೂಪಾಯಿ ಮನ್ನಾ ಮಾಡಿತ್ತು.

ಹಾಗೆ ನೋಡಿದ್ರೆ, ದೇಶದಾದ್ಯಂತ ಸುಮಾರು 4.5 ಕೋಟಿ ರೈತರು ಸಾಲಗಾರರಾಗಿದಾರೆ. ಸುಮಾರು 18.5 ಲಕ್ಷ ಕೋಟಿ ರೂಪಾಯಿ ವರೆಗಿನ ಹಣ ರೈತರ ಸಾಲ ಬಾಕಿಯಾಗಿದ್ರೆ, ಆ ಪೈಕಿ,ಸಹಕಾರಿ ಬ್ಯಾಂಕುಗಳ ಸಾಲ 1.5 ಲಕ್ಷ ಕೋಟಿ ಮಾತ್ರ. ಈ ಹಣ ಎಷ್ಟು ಗೊತ್ತಾ ಸರಿ ಸುಮಾರು ಕೇಂದ್ರ ಸರ್ಕಾರದ ಒಂದು ವರ್ಷದ ಬಜೆಟ್ ಗಾತ್ರಕ್ಕಿಂತಾ ಸ್ವಲ್ಪ ಕಡಿಮೆ.

ಒಂದು ಸರಿ ಯೋಚನೆ ಮಾಡಿ, ಈ ಸಾಲವನ್ನೆಲ್ಲಾ ಸರ್ಕಾರಗಳು ಮನ್ನಾ ಮಾಡ್ತಾ ಹೊದ್ರೆ, ಅದಕ್ಕೆ ಸಂಪನ್ಮೂಲವನ್ನ ಎಲ್ಲಿಂದಾ ಹೊಂದಿಸಬೇಕು..? ಇಷ್ಟಕ್ಕೂ ಈ ಸಾಲ ಮನ್ನಾ ಅನ್ನೋದು ನಿಜವಾದ ರೈತರನ್ನ ತಲುಪಪೋದು ತೀರಾ ಕಡಿಮೆಯಾದಾಗ ಸಾಲ ಮನ್ನ ಯಾಕೆ ಬೇಕು..?

ಈ ಪ್ರಶ್ನೆಗೆ ಸಾಕಷ್ಟು ಜನಾ ಭಾವನಾತ್ಮಕ ಉತ್ತರವನ್ನೇ ಕೊಡ್ತಾರೆ. ಚೋಕ್ಸಿ ಮೋದಿ ಮಲ್ಯ ಮುಂತಾದವರು ಬ್ಯಾಂಕುಗಳಿಗೆ ವಂಚಿಸಿ ದೇಶ ಬಿಟ್ಟಿಲ್ವಾ ಅಂತಾ ಕೇಳ್ತಾರೆ. ಕಳೆದ ಐದು ವರ್ಷಗಳಲ್ಲಿ ಕರ್ನಾಟಕ ಒಂದರಲ್ಲೇ ಸುಮಾರು 3800 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದಾರೆ ಸಾಲದ ಬಾಧೆಯಿಂದಾ ಅಂತಾ ಅಂಕಿ ಅಂಶಗಳನ್ನೂ ನೀಡ್ತಾರೆ. ನಿಮಗೆ ಗೊತ್ತಿರಲಿ, ಇದು ಭಾವನಾತ್ಮಕವಾಗಿ ಯೋಚಿಸಬೇಕಾದ ವಿಷಯಾ ಅಲ್ಲಾ ಬದಲಿಗೆ ಪ್ರಾಯೋಗಿಕವಾಗಿ ಯೋಚಿಸಬೇಕಾದ ಅಂಶ.

ಇವತ್ತು ಕೃಷಿಯ ಹೆಸರಲ್ಲಿ ಸಾಲ ಮಾಡಿದ ಬಹುತೇಕ ರೈತರು ಆ ಹಣವನ್ನ ಕೃಷಿ ಚಟುವಟಿಕೆಗಳ ಮೇಲೆ ತೊಡಗಿಸೋದಿಲ್ಲಾ ಬದಲಿಗೆ ಮದುವೆ ಮುಂಜಿಯಂಥಾ ಅನುತ್ಪಾದಕ ಚಟುವಟಿಕೆಗಳ ಮೇಲೆತೊಡಗಿಸ್ತಅರೆ ಅನ್ನೋ ಆರೋಪ ಕೂಡಾ ಇದೆ.  ಬರಲಿರೋ ಬೆಳೆಯನ್ಮಾನ ನಂಬಿ ಸಾಲ ಮಾಡೋ ರೈತ, ಬೆಲೆ ಕೈಕೊಟ್ಡಿಟೋ ಅಥವಾ ಬೆಳೆ ಕೈಕೊಟ್ಕೊಂಟೋ, ಮಾಡಿಕೊಂಡ  ಸಾಲವನ್ನ  ತಿರಿಸುವ ದಾರಿ ಕಾಣದೇ ದಿಕ್ಕೆಟ್ಟು ಹೋಗ್ತಾನೆ.  ಇನ್ನು ಇವತ್ತಿಗೂ ನಮ್ಮ ಬಹುತೇಕ ರೈತರು ಕೃಷಿಯನ್ನ ಉದ್ಯಮದಂತೆ ನೋಡೋದನ್ನ ಕಲಿತಿಲ್ಲ. ಎಲ್ಲಿಯವರೆಗೆ, ಅವರು  ಕೃಷಿಯನ್ನ ಲಾಭದಾಯಕ ಉದ್ಯಮದ ರೀತಿ ನಡೆಸೋದನ್ನ ಕಲಿಯೋದಿಲ್ಲವೋ, ಅಲ್ಲೀವರೆಗೂ, ಅವರು ಅದರಲ್ಲಿ ಲಾಭ ಕಾಣಲು ಸಾಧ್ಯವಿಲ್ಲ.

ಇನ್ನು ನಮ್ಮ ರೈತರಿಗೆ ಸರ್ಕಾರ ಏನು ಕೊಡ್ತಿದೆ ನೋಡಿ. ಅವರು ಕಟ್ಟೋ ಕೃಷಿ ವಿಮೆಯಷ್ಟು ಹಣ ಕೂಡಾ ಅವರಿಗೆ ಬೆಳೆ ನಾಶವಾದಾಗ ಬರೋದಿಲ್ಲ. ನಮ್ಮ ಕೃಷಿ ಇಲಾಖೆ ಅಧಿಕಾರಿಗಳು ಯಾವತ್ತೂ ಕಛೇರಿಗಳಿಂದಾ ರೈತರ ಜಮೀನಿಗೆ ಬಂದು ಸಲಹೆ ಸೂಚನೆ ಕೊಡೋದಿಲ್ಲಾ.. ಪ್ರಾದೇಶಿಕವಾಗಿ, ರುತುಮಾನಕ್ಕನುಗುಣವಅಗಿ, ಆಯಾ ಮಾರುಕಟ್ಟೆಗಳ ಬೇಡಿಕೆಯನ್ನ ಗಮನಿಸಿಕೊಂಡು, ಯಾವ ಬೆಳೆ ಬೆಳೀಬೇಕು ಅನ್ನೋ ಮಾಹಿತಿ ನಮ್ಮ ರೈತರಿಗೆ ಗೊತ್ತಿಲ್ಲಾ.. ಸೂಕ್ತ  ಮಾರುಕಟ್ಟೆಗಳಿಲ್ಲ.. ಸ್ಟೋರೇಜ್ ವ್ಯವಸ್ಥೆಗಲಿಲ್ಲ.. ಬೆಲೆ ಬಿದ್ದು ಹೋದ್ರೆ ಏನು ಮಾಡಬೇಕು ಗೊತ್ತಿಲ್ಲ.. ಸರ್ಕಾರದ ಬೆಂಬಲ ಬೆಲೆ ಸರಿಯಾಗಿ ವಿತರಣೆಯಾಗೋದಿಲ್ಲ. ಅಧಿಕಾರಿಗಳಿಗೆ ಕಮಿಟ್ ಮೆಂಟ್ ಇಲ್ಲ. ಹೀಗಿರೋವಾಗ ಕೃಷಿ ಈ ದೇಶದಲ್ಲಿ ಯಾವತ್ತು ತಾನೇ ಲಾಭದಾಯಕವಾದೀತು..

ಈಗ ಹೇಳಿ. ಈ ದೇಶಕ್ಕೆ ಬೇಕಿರೋದು ರೈತ ಸಾಲ ಮನ್ನಾ ಅನ್ನೋ ತಾತ್ಕಾಲಿಕ ಜನಪ್ರಿಯ ಸ್ಕೀಮುಗಳಾ ಅಥವಾ, ರೈತರ ಅಭಿವೃದ್ಧಿಗೆ ತಗೋಬೇಕಾದ ಶಾಶ್ವತ ಕ್ರಮಗಳಾ..?

ಇವತ್ತು ಕರ್ನಾಟಕ ಸರ್ಕಾರ ಪ್ರತಿ ರೈತನ   ಸಾಲ ಮನ್ನಾ ಮಾಡಿದ್ರೆ, ಸರ್ಕಾರದ ಬೊಕ್ಕಸಕ್ಕೆ ಸುಮಾರು 53 ಸಾವಿರ ಕೋಟಿ ಹೊರೆಯಾಗಲಿದೆ.. ಮನ್ನಾ ಮಾಡಿಸಿಕೊಂಡ ರೈತ ಮತ್ತೆ ಸಾಲ ಮಾಡ್ತಾನೆ. ಮುಂದೆ ಬರೋ ಸರ್ಕಾರ ಮನ್ನಾ ಮಾಡಬಹುದು  ಅನ್ನೋ ಭರವಸೆಯಲ್ಲಿ ಕೂತ್ಕೋತಾನೆ. ಇದರಿಂದಾ ಇಡೀ ರೈತ ಸಮುದಾಯಕ್ಕೆ ಸಿಗೋ ಲಾಭ ಏನು..?

ಮಾಡ ಬೇಕಿರೋದು ಸಾಲ ಮನ್ನಾ ಅಲ್ಲಾ.  ರೈತರ ಅಭಿವೃದ್ಧಿಗೆ ಶಾಶ್ವತ ಯೋಜನೆಗಳ ಜಾರಿ. ಕೋಲ್ಡ್ ಸ್ಟೋರೇಜ್, ಕೃಷಿ ವಿಮೆ. ಸಾಯಿಲ್ ಹೆಲ್ತ್ ಕಾರ್ಡ್, ರೈತರಿಗೆ ಸೂಕ್ತ ತರಬೇತಿ, ಬೆಳೆಗಳ ಕುರಿತಾದ ಮಾಹಿತಿ, ಉತ್ತಮ ಬೀಜ ಗೊಬ್ಬರ ಗಳ ಲಭ್ಯತೆ.. ನೀರಾವರಿ ಮುಂತಾದವುಗಳ ಕೆಲಸ. ಸರ್ಕಾರ ಗಮನ ಕೊಡಬೇಕಿರೋದು ಅಲ್ಲಿ.

ಹಾಗಂತಾ ನಾವ್ಯಾರೂ ರೈತರ ಸಾಲ ಮನ್ನಾ ಯೋಜನೆಯ ವಿರೋಧಿಗಳಾಗಬೇಕಿಲ್ಲ.. ಅದು ರಾಜಕೀಯವಾಗಿ ಬಳಕೆ ಆಗೋದನ್ನ ವಿರೋಧ ಮಾಡಬೇಕು.  ಶಾಶ್ವತ ಪರಿಹಾರಗಳತ್ತ ಗಮನ ಕೊಡದೇ ಕೇವಲ ತಾತ್ಕಾಲಿಕ ಲಾಭಗಳ ರುಚಿ ತೋರಿಸೋ ರಾಜಕಾರಣವನ್ನ ವಿರೋಧಿಸಬೇಕು. ನಮ್ಮ ಕುಮಾರ ಸ್ವಾಮಿಗಳ ಹೇಳಿಕೆಯನ್ನೇ ಗಮನಿಸಿ, ನಮಗೆ ಸಾಲ ಮನ್ನಾ ಮಾಡೋ ಮನಸ್ಸಿದೆ. ರಾಷ್ಟ್ರೀಕೃತ ಬ್ಯಾಂಕು ಸಹಕಾರೀ ಬ್ಯಾಂಕು ಅಷ್ಟೇ ಅಲ್ಲಾ, ಖಾಸಗಿ ಸಾಲ ಅಂದ್ರೆ ಸ್ಥಳೀಯ ಲೇವಾದೇವಿ ಗಾರರ ಬಳಿಯ ಸಾಲವನ್ನೂ ಮನ್ನಾ ಮಾಡೋ ಮನಸ್ಸಿದೆ ಆದ್ರೆ, ಅದಕ್ಕೆ ಸಹವರ್ತಿ ಪಕ್ಷ ಕಾಂಗ್ರೆಸ್ ಬೆಂಬಲ ಬೇಕು.

ಮೊದಲನೆಯದಾಗಿ ಖಜಾನೆಯಲ್ಲಿ ಹಣ ಇಲ್ಲ ಅದನ್ನ ಕಾಂಗ್ರೆಸ್ ನವರೇ ಖಾಲಿ ಮಾಡಿದಾರೆ. 2.80 ಲಕ್ಷ ಕೊಟಿ ಸಾಲ ಈಗಾಗಲೇ ರಾಜ್ಯದ ತಲೆ ಮೇಲಿದೆ. ಇನ್ನೂಹೆಚ್ಚು ಸಾಲ ಮಾಡಿದರೆ ಆರ್ಥಿಕ ಸ್ಥಿತಿಯನ್ನ ಆದೇವರು ಕೂಡಾ ಕಾಪಾಡಲಾರ. ಎರಡನೆಯ ವಿಷಯ, ಖಾಸಗಿ ಲೇವಾದೇವಿ ಗಾರರ ಸಾಲವನ್ನ ಸರ್ಕಾರ ಹೇಗೆ ತೀರಿಸೋಕೆ ಸಾಧ್ಯ..? ಅದರ ಲೆಕ್ಕ ಹೇಗೆ ತಗೋತಾರೆ..? ಅನುಮತಿ ಇಲ್ಲದ ಖಾಸಗೀ ಲೇವಾದೇವಿ ಅಪರಾಧ ಅಂತಾ ನಮ್ಮ ಕಾನೂನು ಹೇಳತ್ತೆ. ಅಂತಾ ಅಪರಾಧಕ್ಕೆ ಸರ್ಕಾರ ಕುಮ್ಮಕ್ಕು ಕೊಡತ್ತಾ..? ಗಾಡ್ ನೋಸ್..! ಇದೆಲ್ಲಾ ಕೇಳೋದಕ್ಕೆ ಚನ್ನಾಗಿರತ್ತೆ. ಆಚರಣೆಗೆ ಬರೋ ವಿಷಯ ಅಲ್ಲಾ. ಇಲ್ಲಿ ಸಿಂಪ್ಲೀ, ಕುಮಾರ ಸ್ವಾಮಿ ಅವರು ಮೊದಲ ಹೇಳಿಕೆಯಲ್ಲೇ ಕಾಂಗ್ರೆಸ್ ಪಕ್ಷವನ್ನ ಇಕ್ಕಟ್ಟಿಗೆ ಸಿಲುಕಿಸಿ ಒಳ್ಳೇಯವರಾಗೋದಕ್ಕೆ ಹೊರಟ ಹಾಗಿದೆ ಆದ್ರೆ ಅದೂ ವರ್ಕ್ಔಟ್ ಆಗೋದಿಲ್ಲ. ಇದನ್ನೇ ನಾನು ರಾಜಕೀಯ ಅಂತಾ ಹೇಳಿದ್ದು.

ಸಾಲ ಮನ್ನಾ ಮಾಡೋದು ಸಾಧ್ಯಾನೇ ಆಗೋದಾದ್ರೆ, ನಮ್ಮ ನಾಯಕರು ಇನ್ನೂ ಸ್ವಲ್ಪ ರಚನಾತ್ಮಕವಾಗಿ ಆಲೋಚಿಸಬಹುದು. ರೈತರಿಗಾಗಿ ಈ ರಾಜ್ಯದಲ್ಲಿ ಒಂದಷ್ಟು ಶಾಶ್ವತ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಬಹುದು. ನೀರು ಸಿಗೋಹಾಗೆ ಮಾಡಬಹುದು. ರೈತ ತರಬೇತಿ ಕೇಂದ್ರಗಳನ್ನ ಉಪಯುಕ್ತ ರೀತಿಗೆ ತರಬಹುದು. ನೀರಾ ನಿಯಮಗಳನ್ನ ಸಡಿಲಗೊಳಿಸಬಹುದು. ವಾಣಿಜ್ಯ ಬೆಳೆಗಳನ್ನ ಉತ್ತೇಜಿಸಬಹುದು. ತಂತ್ರಜ್ಞಾನನದ ನೆರವು ಸಿಗೋ ಹಾಗೆ ಮಾಡಬಹುದು..ಇಸ್ರೇಲ್ ಥರಾ ನಮ್ಮ ರಾಜ್ಯವನ್ನೂ ಕೃಷಿಯಲ್ಲಿ ಮುಂದುವರೆದ ರಾಜ್ಯವಾಗಿಸಬಹುದು. ಈ ನಾಡಿನ ನೂತನ ಮುಖ್ಯಮಂತ್ರಿ ಕುಮಾರ ಸ್ವಾಮಿ ಸ್ವಲ್ಪ ಆ ಕಡೆ ಗಮನ ಹರಿಸಲಿ. ಏನಂತೀರಿ..?

Default Comments

Leave a Reply

Facebook Comments

Share This