ನಾನು ಅವನಿ ..! ಎರಡು ಮಕ್ಕಳ ತಾಯಿ: ಕೊಲೆಯಾದವಳ ಕಣ್ಣೀರ ಕತೆ..!

ನುಷ್ಯ ಕುಲದ ಉತ್ತಮರಿಗೆಲ್ಲಾ ನನ್ನ ಹೃತ್ಪೂರ್ವಕ ನಮಸ್ಕಾರಗಳು…ನಾನು ಅವನಿ..ಅದೇ, ಮೊನ್ನೆ ನನ್ನನ್ನ ಗುಂಡಿಟ್ಟು ಕೊಲ್ಲಲಾಯ್ತಲ್ಲಾ, ಅದೇ ಅವನಿ..ನನ್ನ ಜಾತಿ, ಧರ್ಮ , ಪಂಗಡ ಎಲ್ಲಾ ಒಂದೇ  ನಾನು ಹೆಣ್ಣು ಹುಲಿ.. ಅಂದಹಾಗೇ ನಾನು ಭಾರತದ ಮಹಾರಾಷ್ಟ್ರ ರಾಜ್ಯದ ಯವಟ್ನಮಲ ಅನ್ನೋ ಜಿಲ್ಲೆಯ ಕಾಡುಗಳಲ್ಲಿ ವಾಸವಾಗಿದ್ದೆ..ನನಗೂ ಹತ್ತನ್ನೆರಡು ವರ್ಷ ವಯಸ್ಸಾಗಿತ್ತು.ಇಲ್ಲಿನ ಕಾನನದಲ್ಲಿ  ಸ್ವಚ್ಚಂದ ಬದುಕನ್ನ ನಡೆಸ್ತಿದ್ದೆ..ಆದ್ರೆ ಅವತ್ತೊಂದಿನ ಅಚಾನಕ್ಕಾಗಿ ನನ್ನ ಪ್ರಪಂಚದೊಳಕ್ಕೆ ಪರಕೀಯನ ಪ್ರವೇಶವಾಗಿತ್ತು.ಬಂದವನು ಮನುಷ್ಯನಂತೆ. ನನಗೇನು ಗೊತ್ತು..? ಹೊಸಾ ಪ್ರಾಣಿ. ಅದರಿಂದಾ ನನಗೆ ಅಪಾಯವಾಗಬಹುದು ಅನ್ನೋ ಹೆದರಿಕೆಯಲ್ಲಿ ನಾನು ಅವನ ಮೇಲೆ ದಾಳಿ ಮಾಡಿದ್ದೆ.

ಸ್ವಾಮೀ, ನಾವು ಹುಲಿಗಳು..ಜನರಿಂದ ಆದಷ್ಟು ದೂರ ಇರೋದಕ್ಕೆ ಬಯಸ್ತೀವಿ..ನಾವು ಯಾವತ್ತೂ ನಾಡಿಗೆ ಬಂದು ಮನುಷ್ಯರನ್ನ ಕೊಲ್ಲಬೇಕು ಅಂತಾ ಬಯಸಿದ್ದವರಲ್ಲಾ..ನಾವು ನಿಮ್ಮ ಹಾಗೆ ಸುನ್ಸುಮ್ಮನೇ ಅವರಿವರನ್ನ ಹೊಡಕೊಂಡು ಬಡಕೊಂಡು ತಿನ್ನೋದಿಲ್ಲ. ನಮಗೆ ಅಂಥಾ ದುರಾಸೇನೂ ಇಲ್ಲ.. ನಾವು ನಿಮ್ಮಷ್ಟು ಕ್ರೂರಿಗಳೂ ಅಲ್ಲ. ನಮ್ಮದೇನಿದ್ರೂ ಹೊಟ್ಟೆ ಹಸಿದಾಗ ಒಂದು ಬೇಟೆ. ಭಯಾ ಆದ್ರೆ ಆತ್ಮರಕ್ಷಣೆಗಾಗಿ ಒಂದು ದಾಳಿ ಅಷ್ಟೇ. ಬಲಿಷ್ಟರಿಗಷ್ಟೇ ಬದುಕುವ ಹಕ್ಕು ಅನ್ನೋದು ಈ ಜಗದ ನಿಯಮ ಅಲ್ವಾ? ಹಾಗಾಗಿನೇ ನಾವು ನಿಮ್ಮ ಸಹವಾಸಾನೇ ಬೇಡ ಅಂತಾ ಕಾಡು ಸೇರಿ ಕೊಂಡು ಬಿಟ್ಟಿದ್ವಿ..

ಆದ್ರೂ ನೀವು ನಮ್ಮನ್ನ ನೆಮ್ಮದಿಯಾಗಿ ಬದುಕೋದಕ್ಕೆ ಬಿಡಲಿಲ್ಲ.. ಅದೆಷ್ಟು ದುರಾಸೇರೀ ನಿಮಗೆ..? ನಿಮ್ಮ ಶೌರ್ಯ ಪರಾಕ್ರಮಗಳನ್ನ ತೋರಿಸಿಕೊಳ್ಳೋದಕ್ಕೆ ನಮ್ಮ ವಂಶವನ್ನೇ ನಾಶ ಮಾಡೋದಕ್ಕೆ ಬಂದ್ರಿ.ನಮ್ಮನ್ನ ಭೇಟೆಯಾಡಿ, ಶೌರ್ಯದ ಕಿರೀಟವನ್ನ ತಲೆ ಮೇಲಿಟ್ಟುಕೊಂಡ್ರಿ. ನಿಮ್ಮ ಆಯುಧಗಳಿಗೆ ನಮ್ಮ ಪೂರ್ವಜರು ಬಲಿಯಾದ್ರು.

ಆಹ್, ಅದೆಂಥಾ ಷಂಡ ಪೌರುಷ..? ಸತ್ತ ಹುಲಿಯ ಮೇಲೆ ಕಾಲಿಟ್ಟು, ಕೋವಿ ಬಂದೂಕನ್ನ ಹೆಗಲಿಗೇರಿಸಿಕೊಂಡು ಫೋಟೋ ತೆಗೆಸಿಕೊಳ್ಳೋ ಭಂಡತನ..? ನಮ್ಮ ಸಂತತಿಯನ್ನ ನಾಶ ಮಾಡೋದ್ರಲ್ಲಿ ನಿಮಗೆ ಅದೆಂಥಾ ಆನಂದ ಸಿಗ್ತಿತ್ತೋ ಏನೋ..? ನನ್ನ ಮನೆಗೆ ನುಗ್ಗಿದ್ರಿ. ಕಾಡನ್ನ ನಾಶ ಮಾಡಿದ್ರಿ. ಅಲ್ಲಿ ನನಗೆ  ಆಹಾರವೇ ಸಿಗದ ಹಾಗೆ ಮಾಡಿದ್ರಿ. ಆದ್ರೂ ನಿಮ್ಮಿಂದಾ ದೂರಾನೇ ಉಳೀಬೇಕು ಅಂತಾ ನಾವಂದುಕೊಂಡ್ವಿ. ಆದ್ರೆ, ನೀವು ಮನುಷ್ಯರು ನಮ್ಮನ್ನ ಬದುಕೋದಕ್ಕೇ ಬಿಡಲಿಲ್ಲ.. ಇವತ್ತು ಚೀನಾದಲ್ಲಿ ನೀವು ನಮ್ಮ ಸಂತತಿಯನ್ನ ಕಾಣೋದಕ್ಕೆ ಸಾಧ್ಯನೇ  ಇಲ್ಲಾ. ಅಲ್ಲೊಂದು ಇಲ್ಲೊಂದು ಝೂನಲ್ಲಿ ಬಿಟ್ರೆ, ಕಾಡಲ್ಲಿದ್ದ ನಮ್ಮ ಸಂತತಿಯನ್ನ  ಸಂಪೂರ್ಣವಾಗಿ ನಾಶ ಮಾಡಿ ಬಿಟ್ಟಿದ್ದಾರೆ.

ಇಡೀ ಪ್ರಪಂಚದಲ್ಲೇ ಇವತ್ತು ನಾವು ಉಳಕೊಂಡಿರೋದು ಬರೀ ಐದಾರು ಸಾವಿರ ಹುಲಿಗಳು ಅಷ್ಟೇ. ಅದ್ರಲ್ಲಿ ಅತಿ ಹೆಚ್ಚು ಹುಲಿಗಳನ್ನ ಹೊಂದಿರೋದು ಈ ಭಾರತದ ಭೂಮಿ..ಸರ್ವೇ ವಿಶ್ವಃ ಸುಖಿನೋಭವಂತು ಅಂತಾ ಬಾಯಿತುಂಬಾ ಹೇಳೋ ಜನಾ ಅಲ್ವಾ ನೀವು.

ನಿಮ್ಮ ದೇವರುಗಳ ಫೋಟೋಗಳಲ್ಲಿ ನಮ್ಮ ಸಂತತಿಯನ್ನೇ ವಾಹನ ಮಾಡಿ ತೋರಿಸಿದೀರಿ. ನಿಮ್ಮ ದುರ್ಗಾ ಮಾತೆಯನ್ನ ಹೊತ್ತು ತಿರುಗೋದಕ್ಕೆ ನಮ್ಮ ಹಿರಿಯರು ಬೇಕಿತ್ತು. ಅಯ್ಯಪ್ಪ ಸ್ವಾಮಿಗೆ ಹಾಲು ಬೇಕು ಅಂದಾಗ ಕರೆದು ಕೊಟ್ಟಿದ್ದು ನಮ್ಮ ಅಜ್ಜಿ ಹುಲಿ.  ಹೀಗಾಗಿ, ನಾವಿಲ್ಲಿ ನಿಶ್ಚಿಂತೆ ಯಿಂದಿರಬಹುದು ಅಂತಾ ಅಂದುಕೊಂಡಿದ್ವಿ. ಇಲ್ಲಿನ ಜನ ಪ್ರಜ್ಞಾವಂತರು. ನಮ್ಮ ತಂಟೆಗೆ ಬರೋದಿಲ್ಲಾ. ನಮ್ಮನ್ನ ಕಾಪಾಡ್ತಾರೆ ಅಂತ ಭಾವಿಸಿದ್ವಿ..ಆದ್ರೆ ಕಡೆಗೇನಾಯ್ತು ನೋಡಿ..?

ನಿಮ್ಮ ನ್ಯಾಯಾಲಯಗಳು ಯಾರಿಗಾದ್ರೂ ಶಿಕ್ಷೆ ಕೊಡೋ ಮೊದಲು, ಅವರ ವಾದವನ್ನ ಮಂಡಿಸೋದಕ್ಕೆ ಅವರಿಗೂ ಒಂದು ಅವಕಾಶ ಕೊಡುತ್ವಲ್ಲವಾ..? ‘ಫಿಟ್ ಆಫ್ ರೇಜಲ್ಲಿ” ಮಾಡಿದ ಹತ್ಯಗೆ ಮನುಷ್ಯನಿಗೂ ಮರಣ ದಂಡನೆ ಕೊಡೋದಿಲ್ಲ ನೀವು. ಆತ್ಮ ರಕ್ಷಣೆಗೆ ಕೊಲೆಮಾಡಿದ್ರೆ ನಿಮ್ಮ ಕಾನೂನಲ್ಲಿ ಶಿಕ್ಷೆ ಇಲ್ಲಾ.. ಆದ್ರೆ ನನಗ್ಯಾಕೆ ಈ ಶಿಕ್ಷೆ ಕೊಟ್ರಿ..? ನಾನು ಮಾತು ಬಾರದ ಮೂಕ ಪ್ರಾಣಿ ಅಂತಲಾ..? ಆಯ್ತು, ನಾನು ಹದಿಮೂರು ಜನ್ರನ್ನ ಬಲಿ ಪಡೆದಿದ್ದೀದ್ದೀನಿ ಅಂತಾ ಹೇಳ್ತೀರಲ್ಲಾ..? ಅವ್ರೆಲ್ಲ ಎಲ್ಲಿ ಹೇಗೆ  ಸತ್ತರು ಅನ್ನೋದು ನಿಮಗೆ ಗೊತ್ತಾ..? ನಾನು ಅವರ ಮನೆಗೆ ನುಗ್ಗಿ ಯಾರನ್ನಾದ್ರೂ ಕೊಲೆ ಮಾಡಿದ್ನಾ..? ನನ್ನ ಕಾಡಲ್ಲಿ ನಾನಿದ್ದೆ ತಾನೇ..? ನನ್ನ ಜಾಗಕ್ಕೆ ಬರೋದಕ್ಕೆ ನಿಮಗೆ ಯಾರಾದ್ರೂ ತಾಂಬೂಲ ಕೊಟ್ಟು ಕರೆದಿದ್ರಾ..? ಇಷ್ಟಕ್ಕೂ ಆ ಹದಿಮೂರೂ ಜನರನ್ನ ನಾನೇ ಕೊಂದೆ ಅಂತಾ ಖಚಿತವಾಗಿ ಹೇಳೋದಕ್ಕೆ ಯಾವುದಾದ್ರೂ ಸಾಕ್ಷ್ಯಗಳಿವೆಯಾ..?ನಾವು ಹೇಗೆ ಮನುಷ್ಯರಿಂದ ದೂರ ಇದ್ದೀವೋ ಅದೇ ರೀತಿ ಮನುಷ್ಯ ಕೂಡಾ ನಮ್ಮಿಂದು ದೂರ ಇರಬೇಕು ಅಲ್ವಾ. ಶತಮಾನಗಳಿಂದಾ ನಿಮ್ಮ ದಬ್ಬಾಳಿಕೆಗೆ ತುತ್ತಾಗ್ತಾಬಂದವರು ನಾವು. ನಿಮ್ಮನ್ನ ನೊಡಿದ್ರೆ ನಮಗೆ ಭಯಾ ಆಗೋದಿಲ್ವಾ..? ಆ ಭಯದಲ್ಲೇ ನಾವು ದಾಳಿ ಮಾಡ್ತೀವಿ.

ಎಲ್ಲಾ ಬುದ್ಧಿವಂತಿಕೆ ಇರೋ ನೀವೇ ದಿನಾ ಒಬ್ಬರನ್ನೊಬ್ಬರು ವಿನಾಕಾರಣ ಕೊಂದುಕೊಳ್ತಿರೋವಾಗ ಬುದ್ಧೀನೇ ಇಲ್ಲದ ಕಾಡು ಪ್ರಾಣಿಗಳು ನಾವು. ಆತ್ಮ ರಕ್ಷಣೆಗೂ ನಾವು ಯಾರಮೇಲೂ ದಾಳಿ ಮಾಡಬಾರದು ಅಂತಾ ನೀವು ಬಯಸೋದು ಸರೀನಾ..?ಹೋಗಲಿ, ಅವತ್ತು ನನ್ನ ಮೇಲೆ ದಾಳಿ ಮಾಡೋದಕ್ಕೆ ಬಂದ್ರಲ್ಲಾ, ಕಾಡು ಕಾಪಾಡೋದಕ್ಕೆ ಅಂತಲೇ ಸರ್ಕಾರದಿಂದಾ ಹಣ ಪಡೆಯೋ ಜನಾ..? ಅವರು ಮನಸ್ಸು ಮಾಡಿದ್ರೆ ಅರವಳಿಕೆ ಕೊಟ್ಟು ನನ್ನನ್ನ ಜೀವಂತವಾಗಿ ಬಂಧಿಸೋದು ಅವರಿಗೆ ಕಷ್ಟವಿತ್ತಾ..? ಅಲ್ಲಾ, ಬಂದೂಕಿನಿಂದಾ ಗುಂಡು ಹಾರಿಸಿ ಕೊಲ್ಲೋದು ಸಾಧ್ಯವಾಗತ್ತೆ ಅಂದಾಗ ಅದೇ ಬಂದೂಕಿನಿಂದಾ ಅರವಳಿಕೆ ಚುಚ್ಚುಮದ್ದನ್ನ ಹಾರಿಸೋದು ಅವರಿಗೆ ಕಷ್ಟವಾಗ್ತಿತ್ತಾ..? ನೀವು ನನ್ನನ್ನ ಕೊಲ್ಲಲೇ ಬೇಕು ಅಂತಾ ನಿರ್ಧರಿಸಿಕೊಂಡೇ ಕಾಡಿಗೆ ಬಂದಿದ್ರಿ. ಕೊಂದು ಹಾಕಿದ್ರಿ. ನಿಮ್ಮ ವಂಚನೆಗೆ ಧಿಕ್ಕಾರವಿರಲಿ. ನನಗೆ ಇಬ್ಬರು ಮಕ್ಕಳು. ಅವರ ವಯಸ್ಸು ಕೇವಲ ಹನ್ನೊಂದು ತಿಂಗಳು. ಪಾಪ ನಾನು ಬರ್ತೀನಿ ಅಂತಾ ಆಕಾಡಲ್ಲಿ ಇನ್ನೂ ಕಾಯ್ತಿದಾರೋ ಏನೋ..?                              ನಾನು ವಾಪಸ್ ಬರೋದಿಲ್ಲ ಅನ್ನೋದನ್ನ ಅವರಿಗೆ ಯಾರೂ ಹೇಳೋದಕ್ಕೂ ದಿಕ್ಕಿಲ್ಲ. ನಿಮ್ಮ ಸಮಾಜದಲ್ಲಿ ಇಂಥಾ ಕೊಲೆಯಾದ್ರೆ ಸರ್ಕಾರ ಪರಿಹಾರ ಕೊಡತ್ತೆ ಆಶ್ರಯ ಕಲ್ಪಿಸಿಕೊಡತ್ತೆ. ಆದ್ರೆ ಅಲ್ಲಿ ಕಾಡಲ್ಲಿ ಕಾಯ್ತಾ ಕೂತಿರೋ ನನ್ನ ಮುದ್ದು ಕಂದಮ್ಮಗಳಿಗೆ ಯಾರು ದಿಕ್ಕು..? ಯೋಚನೆ ಮಾಡಿದೀರಾ..? ನನ್ನನ್ನೇನೋ ಕೊಂದು ಬಿಟ್ರಿ. ಇನ್ನೇನೇ ಮಾಡಿದ್ರೂ ನನ್ನ ಜೀವ ವಾಪಸ್ ಬರೋದಿಲ್ಲ.. ಆದ್ರೆ ಅಟ್ ಲೀಸ್ಟ್ ನನ್ನ ಆ ಎರಡು ಕಂದಮ್ಮಗಳನ್ನಾದ್ರು ರಕ್ಷಿಸಿ ಕೊಳ್ಲಿ..ಮುಂದೆ  ನಿಮ್ಮ ಮಕ್ಕಳಿಗೆ ನಮ್ಮನ್ನ ತೋರಿಸೋದಕ್ಕಾದ್ರು ಉಪಯೋಗ ಆಗುತ್ತೆ..ಇಷ್ಟು ಹೇಳಿ ನಾನು ಹೊರಡ್ತಿದ್ದೀನಿ..

ಅಣ್ಣಾ. ಅಣ್ಣಾ ಹಜಾರೆ..! ನಿಮ್ಮೂರಿನ ಹತ್ರಾನೇ ನನ್ನ ಕೊಲೆಯಾಗಿದ್ದು. ಯಾವ್ಯಾವುದಕ್ಕೋ ಉಪವಾಸ ಮಾಡ್ತೀರಲ್ಲಾ, ನನ್ನನ್ನ ಕೊಲ್ಲಬೇಕು ಅಂದ್ಕೊಂಡಾಗ ಈ ಅವನಿಯನ್ನ ಕಾಪಾಡೋದಕ್ಕೆ ಒಂದೇ ಒಂದು ಬಾರಿ ದನಿ ತೆಗೀಬೇಕೂ ಅಂತಾ ನಿಮಗೆ ಅನ್ನಿಸಲಿಲ್ವಾ..? ನಿಮ್ಮ ಇಡೀ ಕಾಡಲ್ಲಿ ಇದ್ದದ್ದು ನನ್ನದೊಂದೇ ಕುಟುಂಬ. ಅಪರಾಧ ನಡೀವಾಗ ಬಾಯಿ ಮುಚ್ಕೊಂಡು ಕೂಡೋದೂ ಕೂಡಾ ಅಪರಾಧವೇ ಆಗತ್ತೆ ಅನ್ನೋದು ನಿಮಗೆ ಗೊತ್ತಿರಲಿಲ್ವಾ..? ಬಿಡೀ ಎಲ್ಲಾ ನನ್ನ ಹಣೆ ಬರಹ..! ನನ್ನ ಈ ಮಾತುಗಳು ನಿಮಗೆ ಅರ್ಥವಾಗಿದೆ ಅದು ಕೋಳ್ತೀನಿ. ಮನುಷ್ಯರೇ,  ನೀವು ಬದುಕಿ. ಅದರ ಜೊತೆಗೆ ನಮ್ಮನ್ನೂ ಬದುಕೋದಕ್ಕೆ ಬಿಡಿ. ನಾನು ಹೊರಟೆ. ಹೋಗೋ ಮೊದಲು, ನನಗಾಗಿ ದನಿ ಎತ್ತಿದ, ಕಣ್ಣೀರು ಮಿಡಿದ ಹೃದಯವಂತರಿಗೆ ಕೃತಜ್ಞತೆಗಳನ್ನ ಹೇಳ್ತಾ, ಕ್ರೂರಿ ಮನುಷ್ಯ ಸಂಕುಲದ ಒಣ ಪೌರುಷಕ್ಕೆ ಸ್ವಾರ್ಥಕ್ಕೆ ಧಿಕ್ಕಾರವನ್ನ ಕೂಗ್ತಾ ಹೋಗ್ತಿದೀನಿ.  ನನ್ನ ಮಕ್ಕಳ ಶಾಪ ನಿಮ್ಮ ಮಕ್ಕಳಿಗೆ ತಟ್ಟದಿರಲಿ. ನಾನು ಹೊರಟೆ.

ಇಂತಿ, ನಿಮ್ಮ

ನತದೃಷ್ಟ ಅವನಿ. ನಾನು ಎರಡು ಮಕ್ಕಳ ತಾಯಿ.

Share This