ಮಕ್ಕಳನ್ನು ಕತ್ತರಿಸಿ ಕೊಲ್ಲುವಾಗಲೂ ಆ ಯೋಧ ಏನು ಹೇಳಿದ್ದನಂತೆ ಗೊತ್ತಾ..? ರಚ್ಚೆ ಹಿಡಿದ ಮಗುವಿನಂತೆ ಕಾಡುತಿದೆ ಅವನ ನೆನಪು..!

      ಯಾಕೆ ಅವನು ನನ್ನನ್ನ ಅಷ್ಟು ಕಾಡ್ತಿದಾನೆ..? ಡಿಸೆಂಬರ್ ತಿಂಗಳ ಛಳಿಯಂತೆ ನಂದಿ ಬೆಟ್ಟದ ಮೇಲಿನ ಮೋಡದಂತೆ ಅವನ್ಯಾಕೆ ನನ್ನನ್ನ ಆವರಿಸಿಕೊಳ್ಳೊದಕ್ಕೆ ಪ್ರಯತ್ನಿಸ್ತಿದಾನೆ..? ಗೊತ್ತಾಗ್ತಿಲ್ಲಾ..!
ಹಾಗೆ ನೋಡಿದ್ರೆ, ನಾನು ಇತ್ತೀಚಿನ ವರೆಗೂ ಅವನ ಹೆಸರು ಕೂಡಾ ಕೇಳಿರಲಿಲ್ಲಾ.. ಆದ್ರೆ, ಮೊನ್ನೆ ಯಾವುದೋ ಇತಿಹಾಸದ ಪುಸ್ತಕದಲ್ಲಿ ಕಣ್ಣಾಡಿಸ್ತಿದ್ದಾಗ ನನ್ನ ಗಮನ ಸೆಳೆದಿದ್ದು ಅವನ ಹೆಸರು.  ಅವನು ಹೆಂಜನಾಯಕ.

ಬಹುಶಾ ನಿಮ್ಮಲ್ಲಿ ಸಾಕಷ್ಟು ಜನಾ ಆ ಹೆಸರನ್ನ ಕೇಳಿರೋದಕ್ಕೂ ಸಾಧ್ಯವಿಲ್ಲ.. ಯಾಕೇ ಅಂದ್ರೆ, ನಮ್ಮ ಇತಿಹಾಸವನ್ನ ಬರೆದ ಅತಿ ಬುದ್ಧಿವಂತರಿಗೆ ಈ ವ್ಯಕ್ತಿತ್ವವನ್ನ ಸರಿಯಾಗಿ ದಾಖಲಿಸಬೇಕು ಅಂತಾ ಯಾವತ್ತೂ ಅನ್ನಿಸಲೇ ಇಲ್ಲಾ..

ಯಾಕೆ ಗೊತ್ತಾ..? ಅವನು ಸಾಮ್ರಾಜ್ಯವನ್ನ ಆಳಿದ ಮಹಾರಾಜನಲ್ಲಾ.. ಅವನ ಆಸ್ಥಾನದಲ್ಲಿ ವಂದಿ ಮಾಗಧರಿರಲಿಲ್ಲಾ.. ಅವನು ಮಹಾ ಸಂಪತ್ತಿನ ಒಡೆಯನೂ ಆಗಿರಲಿಲ್ಲಾ.. ಅವನ ಗುಣಗಾನ ಮಾಡೋದಕ್ಕೆ ಅವನ ಹೆಸರಲ್ಲಿ ಲಾಬಿ ಮಾಡೋದಕ್ಕೆ ಜಯಂತಿಗಳನ್ನ ಆಚರಿಸೋದಕ್ಕೆ ಅವನು ದೊಡ್ಡ ಒಟ್ ಬ್ಯಾಂಕಿನ ಜಾತಿಯವನೂ ಅಲ್ಲ..

ಹೀಗಿದ್ದಾಗ ಅವನ ನೆನಪಾದ್ರೂ ಹೇಗೆ ಆಗೋದಕ್ಕೆ ಸಾಧ್ಯ..? ಅವನು ಹೆಂಜನಾಯಕ..! ತೊಳಲ್ಲಿ ಶಕ್ತಿ ಇತ್ತು.. ಮನಸ್ಸಲ್ಲಿ ಸ್ವಾಭಿಮಾನ ಇತ್ತು.. ಅಷ್ಟೇ ಪ್ರಮಾಣದ ಹುಂಬತನ ಇತ್ತು.. ಸೋಂದಾ ಅನ್ನೋ ಸಂಸ್ಥಾನದ ಬಳಿಯ ನಾಲ್ಕಾರು ದ್ವೀಪಗಳ ಒಡೆಯನಾಗಿದ್ದನಂತೆ.. ಗೋವಾದ ಕೆಲ ಪ್ರದೇಶ ಹಾಗೇ ಕಾರವಾರದ ಕೆಲ ಭಾಗಗಳನ್ನ ಆಳ್ತಿದ್ದನಂತೆ ಈ ಹೆಂಜನಾಯಕ. ಅವನು ಹುಟ್ಟಿದ್ದು 1736ರಲ್ಲಿ.

ಕ್ಷತ್ರಿಯ ಕೋಮರ ಪಂತ ಜನಾಂಗಕ್ಕೆ ಸೇರಿದವನು. ಬಹುಶಃ ಚಿಕ್ಕದೊಂದು ಸೈನ್ಯವನ್ನ ಇಟ್ಟುಕೊಂಡಿದ್ದನೇನೋ..ಕೆಳದಿ ಅರಸರ ಸಾಮಂತನಾಗಿದ್ದ ಅಂತಾ ಹೇಳಲಾಗತ್ತೆ. ಈ ಹೆಂಜನಾಯಕ ಮರಾಠರ ವಿರುದ್ಧ, ಮೈಸೂರಿನ ಟಿಪ್ಪೂ ಸುಲ್ತಾನನ ವಿರುದ್ಧ , ಬ್ರಿಟಿಷರ ವಿರುದ್ಧ ಹೋರಾಡ್ತಾ, ಯಾರೊಂದಿಗೂ ಯಾವತ್ತೂ ರಾಜಿ ಮಾಡಿಕೊಳ್ಳದೇನೇ, ಕಾಳಿ ನದಿಯ ದಂಡೆಯ ಮೇಲೆ 1801ರಲ್ಲಿ ವೀರ ಮರಣವನ್ನಪ್ತಾನೆ.
ಬಹುಶಾ, ನನಗೆ ಕಾಡ್ತಿರೋದು ಅವನ ಹೋರಾಟ ಅವನ ವೀರ ಮರಣ ಇದ್ಯಾವುದೂ ಅಲ್ಲಾ.. ಅವನ ಮಕ್ಕಳ ಸಾವು.. ಮತ್ತು ಅವತ್ತು ಅವನದಕ್ಕೆ ಪ್ರತಿಕ್ರಿಯಿಸಿದ ರೀತಿ…!

ಈ ಹೆಂಜನಾಯಕನ ಮೇಲೆ ಅಂದ್ರೆ, ಸೋಂದೆಯ ಮೇಲೆ ಮೈಸುರಿನ ಹುಲಿ ಟಿಪ್ಪೂ ದಾಳಿ ಮಾಡ್ತಾನೆ. ಮೈಸೂರಿನ ಭಾರೀ ಸೈನ್ಯದ ಮುಂದೆ ನಿಲ್ಲೋದಕ್ಕಾಗದೇ ಸೋಂದೆಯ ವೀರರು ಗೆರಿಲ್ಲಾ ಮಾದರಿಯ ಯುದ್ಧ ಶುರು ಮಾಡ್ತಾರೆ. ಆ ಘನ ಘೋರ ಯುದ್ಧಲ್ಲಿ ಸೋಂದೆಯ ಸೈನ್ಯಕ್ಕೆ ಹಿನ್ನಡೆಯಾಗತ್ತೆ.. ಸೋಂದೆಯ ಹೆಂಜನಾಯಕನ್ನ ಬಂಧಿಸಲೇ ಬೇಕು ಅಂತಾ ನಿರ್ಧಾರ ಮಾಡೋ ಟಿಪ್ಪೂ ಅದಕ್ಕಾಗಿ ಸಕಲ ತಂತ್ರಗಳನ್ನೂ

ಮಾಡ್ತಾನೆ.ಕಡೆಗೆ ಹೆಂಜನಾಯಕನ ಇಬ್ಬರು ಚಿಕ್ಕ ಮಕ್ಕಳನ್ನ ಬಂಧಿಸಿ, ಶರಣಾಗುವಂತೆ ಸಂದೇಶ ಕಳಿಸ್ತಾನೆ. ಒಂದು ವೇಳೆ ಶರಣಾಗದಿದ್ದರೆ ಆ ಮಕ್ಕಳನ್ನ ಕೊಲ್ತೀನಿ ಅಂತಾ ಹೇಳೀಕಳಿಸಿದ್ದನಂತೆ ಮೈಸೂರಿನ ಹುಲಿ..!

ಅಂಥಾ ಪರಿಸ್ಥಿತಿಯಲ್ಲಿ ಟಿಪ್ಪೂ ಸುಲ್ತಾನನೇ ಇದ್ದಿದ್ದರೂ ಕೂಡಲೇ ಓಡಿ ಬಂದು ಶರಣಾಗಿ ಕಪ್ಪ ಕೊಟ್ಟು ತನ್ನ ಮತ್ತು ಮಕ್ಕಳ ಜೀವ ಉಳಿಸಿಕೊಳ್ತಿದ್ದನೇನೋ..! ಆದ್ರೆ, ಹೆಂಜನಾಯಕ ಹಾಗೆ ಮಾಡಲಿಲ್ಲಾ.. ಈ ದೇಶಕ್ಕಾಗಿ ಆ ಮಕ್ಕಳು ಬಲಿದಾನ ಮಾಡಬೇಕಾಗಿ ಬಂದರೆ ನಾನು ಅದನ್ನ ವೀರ ಮರಣ ಅಂತಾ ಭಾವಿಸ್ತೀನಿ ಅಂದು ಬಿಟ್ಟ.. ಟಿಪ್ಪೂಗೆ ಶರಣಾಗೋದಕ್ಕೆ ನಿರಾಕರಿಸಿಬಿಟ್ಟ.

ಟಿಪ್ಪೂ ಸುಲ್ತಾನ್, ಹೆಂಜನಾಯಕನ ಆ ಇಬ್ಬರು ಕಂದಮ್ಮಗಳನ್ನ ಅತ್ಯಂತ ನಿರ್ದಯವಾಗಿ ಕೊಲೆ ಮಾಡಿ ತನ್ನ ಕ್ರೌರ್ಯವನ್ನ ಪ್ರದರ್ಶಿಸ್ತಾನೆ. ಆದ್ರೆ ನಾಯಕ ಮಾತ್ರ ಕೆಳಗಿಳಿದು ಬರಲೇ ಇಲ್ಲಾ..

ಮುಂದೆ ಈ ಹೆಂಜನಾಯಕ ಬ್ರಿಟಿಷರ ವಿರುದ್ಧ ಕೂಡಾ ಹೋರಾಡ್ತಾನೆ.. ಹಾಗೆ ಹೋರಾಟ ಮಾಡ್ತಾ ಮಾಡ್ತಾ ಕಾಳಿ ನದಿಯ ದಂಡೆಯ ಮೇಲೆ ಆಂಗ್ಲರ ಗುಂಡಿಗೆ ಬಲಿಯಾಗಿ ವೀರಮರಣವನ್ನಪ್ತಾನೆ.

ಹಾಗೆ ನೊಡಿದ್ರೆ, ಮೂರನೇ ಮೈಸೂರು ಯುದ್ಧದಲ್ಲಿ ಟಿಪ್ಪೂ ಮಕ್ಕಳನ್ನ ಒತ್ತೆಯಾಳಾಗಿಸಿಕೊಂಡಿದ್ದ ಕಾರ್ನ್ವಾಲೀಸ್ ಎಷ್ಟೋ ಒಳ್ಳೆಯವನು ಅಲ್ವಾ..? ಆ ಮಕ್ಕಳನ್ನ ಹಿಂಸಿಸದೇ, ಅವರನ್ನ ತನ್ನ ಮಕ್ಕಳಂತೇ ನೊಡಿಕೊಂಡು ವಿದ್ಯಾಭ್ಯಾಸ ಮಾಡಿಸಿ ಕಡೆಗೆ ಬಾಕಿ ಚುಕ್ತಾ ಆದ ನಂತರ ಮೈಸೂರಿಗೆ ಅವರನ್ನ ಕಳಿಸಿಕೊಡ್ತಾನೆ..

ಆದ್ರೆ ಟಿಪ್ಪೂ..? ಕೊಡಗಿನ ವೀರ ರಾಜೇಂದ್ರನ ಮಕ್ಕಳನ್ನ ಬಂಧೀಕಾನೆಯಲ್ಲಿಟ್ಟಿದ್ದ.. ಹೆಂಜನಾಯಕನ ಚಿಕ್ಕ ಮಕ್ಕಳನ್ನ ಕೊಂದು ಹಾಕಿದ್ದ.. ಇನ್ನು ಆ ಹೆಂಜನಾಯಕ.. ತನ್ನ ಮಕ್ಕಳನ್ನ ಶತ್ರುವಿನ ಕೈಲಿ ಸಾಯೋದಕ್ಕೆ ಬಿಟ್ಟನೇ ಹೊರತು, ತನ್ನನ್ನ ನಂಬಿದ ಜನರ ಕೈಬಿಡಲಿಲ್ಲಾ..

ಈ ವೀರ ಹೆಂಜನಾಯಕನ ಬಗ್ಗೆ ಇನ್ನಷ್ಟು ಮಾಹಿತಿ ಎಲ್ಲಾದ್ರೂ ಸಿಕ್ಕೀತಾ ಹುಡುಕ್ತಿದೀನಿ.. ಕಾರವಾರದ ಸಮೀಪ ಅವನ ಮೂರ್ತಿ ಪ್ರತಿಷ್ಠಾಪನೆಯಾಗಿದೆಯಂತೆ.. ಅದ್ರೆ, ಆ ನಾಯಕನ ಬಗ್ಗೆ ಹೆಚ್ಚಿನ ಮಾಹಿತಿ ಸಿಗ್ತಿಲ್ಲ.. ಇನ್ನು ಹುಡುಕಬೇಕು..!
ನಮ್ಮ ಇತಿಹಾಸದ ಪುಸ್ತಕಗಳನ್ನ ಬರೆಯುವ ಮಹಾ ಪಂಡಿತರು ಇಂಥವರ ಬಗ್ಗೆ ಯಾಕೆ ಬರೆಯೋದಿಲ್ಲಾ..? ಬಾಬರ್ ಯಾರ ಮಗ..? ಚೆಂಗೀಸ್ ಖಾನ್ ಚೈನಾ ಮೇಲೆ ಯಾಕೆ ದಾಳಿ ಮಾಡಿದ್ದ..? ಝಾರ್ ದೊರೆಗಳು ಕುಡೀತಿದ್ದ ಓಡ್ಕಾ ಯಾವುದು..? ಹುಮಯೂನನ ಹೆಂಡತಿಯರು ಎಷ್ಟು ಜನಾ..? ಇಂಥಾ ಮಾಹಿತಿಗಿಂತಾ ನಮ್ಮ ರಾಜ್ಯದ ನಮ್ಮ ನೆಲದ ಯೊಧರ ಬಗ್ಗೆ ಅರಸರ ಬಗ್ಗೆ ಇಲ್ಲಿನ ತಿಹಾಸಿಕ ಪ್ರಮಾದಗಳ ಬಗ್ಗೆ ಕೊಡುಗೆಗಳ ಬಗ್ಗೆ ಒಳಿತು ಕೆಡಕುಗಳ ಬಗ್ಗೆ ಯಾಕೆ ಬರೆಯೋದಿಲ್ಲಾ..?

ನಮ್ಮ ಮಕ್ಕಳಿಗೆ ಅವರ ಊರಿನ ಇತಿಹಾಸ ತಿಳಿಯೋಹಾಗಾದ್ರೆ ಎಷ್ಟು ಚೆಂದ ಅಲ್ವಾ..? ಈ ಹೆಂಜನಾಯಕ ಅನ್ನೋ Unsung hero ನನ್ನನ್ನ ಬಿಡೋ ಹಾಗೆ ಕಾಣ್ತಿಲ್ಲಾ.. ಅವನ ಬಗ್ಗೆ ಅಂತೆ ಕಂತೆಗಳಿಂದ ದೂರವಾದ ಇನ್ನಷ್ಟು ಮಾಹಿತಿಯನ್ನ ಹುಡುಕೋದಕ್ಕೆ ಕುಳಿತಿದೀನಿ.. ನಿಮಗೆ ಯಾರಿಗಾದ್ರೂ ಹೆಂಜನಾಯಕನ ಬಗ್ಗೆ ಗೊತ್ತಿದ್ರೆ ದಯವಿಟ್ಟು ನನಗೆ ತಿಳಿಸಿ.

RaghuNRaaghu

 

Default Comments

Leave a Reply

Facebook Comments

Share This