ದ್ವೇಷಕ್ಕೆ ಬಿದ್ದವರು ಹೊರಿಸಿದ್ದು ಎಂಥಾ ಆರೋಪ ಗೊತ್ತಾ..?

ಸಾರ್, ಎದೆ ಮೇಲಿನ ಭಾರ ಇಳಿದಂಗಾಯ್ತು.. ಇವತ್ತು ನೆಮ್ಮದಿಯಾಗಿ ನಿದ್ದೆ ಮಾಡ್ತೀನಿ.. ಹಾಗಂದ ಗೆಳೆಯನ ಕಣ್ಣಲ್ಲಿ ತೆಳು ನೀರ ಪೊರೆ. ಮೊನ್ನೆ ಬೆಂಗಳೂರಿನ ನ್ಯಾಯಾಲಯದಲ್ಲಿ ನಿರ್ದೋಷಿಗಳು ಅನ್ನಿಸಿಕೊಂಡು ಹೊರ ಬಂದ ಮರುಕ್ಷಣವೇ ಆ ಗೆಳೆಯ ದೊಡ್ಡದಾದ ನಿಟ್ಟುಸಿರು ಬಿಟ್ಟಿದ್ದ.
ಹೌದು, ಅದು ಸತತ ಎಂಟು ವರ್ಷಗಳ ಹೋರಾಟ. ಒಂದು ಸುಖಾಸುಮ್ಮನೆ ಹಾಕಿದ ಸುಳ್ಳು ಕೇಸು, ಸಾಹಸ ಪತ್ರಿಕೋದ್ಯಮ ಮಾಡೋ ಹುಚ್ಚು ಹಂಬಲಕ್ಕೆ, ಕೊನೆ ಇಲ್ಲದ ಸಾಹಸಕ್ಕೆ ಸಿಕ್ಕ ಚಿಕ್ಕ ಬಳುವಳಿ. ನಾವು ನೊಂದಿದ್ದು ಬೆಂದಿದ್ದು ಏನು ಕಡಿಮೇನಾ..?

ನಿಮಗೆ ನೆನಪಿಲ್ಲದೇ ಇರಬಹುದು,https://www.mid-day.com/articles/sex-swami-case-annoyed-cid-vents-ire-on-journalists/81644ನಿತ್ಯಾನಂದ ಅನ್ನೋ ಬಿಡದಿಯ ಸ್ವಾಮಿಯನ್ನ ಪಲ್ಲಂಗದ ಕೇಸಲ್ಲಿ ಸಿಐಡಿ ಪೊಲೀಸರು ಎತ್ತಾಕ್ಕೊಂಡು ಹೋಗಿ ಕಾರ್ಲ್ಟನ್ ಹೌಸ್ ನ ಕೆಳಮಹಡಿಯ ಸೆಲ್ ಒಂದರಲ್ಲಿ ಬಿಡದಿ ಮಾಡಿಸಿದ್ದರಲ್ಲಾ, ಆಗ ಆ ಸ್ವಾಮಿ ಡ್ರೈಫ್ರೂಟ್ಸ್ ತಿಂದಾ ಮೊಸರನ್ನ ತಿಂದಾ ಅಂತೆಲ್ಲಾ ಮಿಡಿಯಾಗಳು ಸುದ್ದಿ ಮಾಡ್ತಿದ್ವು.
ಒಂದಿನ ಇದ್ದಕ್ಕಿದ್ದಹಾಗೇ ಸಿಐಡಿ ಅಧಿಕಾರಿಗಳು ನನ್ನ ಕಛೇರಿಯ ಮೇಲೆ ದಾಳಿ ಮಾಡಿದ್ರು. ನಿಮ್ಮ ಕಂಪ್ಯೂಟರಿನ ಹಾರ್ಡ್ ಡಿಸ್ಕ್ ಬೇಕು ಸಾಪ್ಟ್ ಡಿಸ್ಕ್ ಬೇಕು ಅದು ಬೇಕು ಇದು ಬೇಕು ಅಂತಾ ಇಲ್ಲದ ವರಾತ ಹಚ್ಕೊಂಡು ಕೈಗೆ ಸಿಕ್ಕಿದ್ದನ್ನೆಲ್ಲಾ ಸೀಜ್ ಮಾಡಿಕೊಂಡು ಹೋದ್ರು.. ಆ ಕ್ಷಣಕ್ಕೆ ಅವರಿಗೆ ಏನು ಬೇಕಾಗಿತ್ತು ಅನ್ನೋದು ನಮಗೆ ಗೊತ್ತಾಗಲಿಲ್ಲ.. ಆದ್ರೆ, ಅದಾದ ಒಂದೇ ದಿನಕ್ಕೆ ಪೊಲೀಸರು, ಅವತ್ತಿನ ಗೃಹ ಇಲಾಖೆಯ ಉನ್ನತಾಧಿಕಾರಿಗಳು ಸಚಿವರು ಹೀಗೆ ಎಲ್ಲರ ಬಣ್ಣ ಬಿಟ್ಕೊಳೋಕೆ ಶುರುವಾಯ್ತಲ್ಲಾ..
ಅವರು ನಿತ್ಯಾನಂದನ ಸಿಐಡಿ ಕಛೇರಿಯ ರಹಸ್ಯ ಸೋರಿಕೆಯಾಗಿದೆ ಅನ್ನೋ ಕೇಸು ಹಾಕಿ ನನ್ನನ್ನ ಬಂಧಿಸಲೇ ಬೇಕು ಅನ್ನೋ ಹಟಕ್ಕೆ ಬಿದ್ದಿದ್ರು.. ಅದಕ್ಕಿಂತಾ ಮೊದಲು ಗೆಳೆಯ ಸುರೇಶ್ ಅವರ ಬೆನ್ನು ಬಿದ್ರು.

                                                          ಆ ಹದಿನೆಂಟು ದಿನಗಳು

ನನ್ನದು ಅಲ್ಲಿಂದಾ 18 ದಿನಗಳ ಕಾಲ ಅಜ್ಞಾತವಾಸ.. ಆಮೇಲೆ ನಿರೀಕ್ಷಣಾ ಜಾಮೀನು.. ನ್ಯಾಯಾಲಯದಲ್ಲಿ ಎಂಟು ವರ್ಷಗಳ ಸುದೀರ್ಘ ಹೋರಾಟ.. ಅದೊಂದು ದೊಡ್ಡಕತೆ. ಅದನ್ನ ನಾನು ನಿಮಗೆ ಹೇಳಲೇ ಬೇಕು ಮುಂದೆ ಹೇಳ್ತೀನಿ.
ವಿಷಯಾ ಏನೂ ಅಂದ್ರೆ, ಒಂದು ಕಡೆ ಪೊಲೀಸರು, ಅವತ್ತಿನ ಪೊಲೀಸರ ಮಂತ್ರಿಗಳೂ, ನನ್ನ ಮೇಲೆ ತಮಗಿರೋ ಹಳೇ ದ್ವೇಷಗಳನ್ನೆಲ್ಲಾ ತೀರಿಸಿಕೊಳ್ಳೊದಕ್ಕೆ ಹೊರಟಿದ್ದಾಗ ನನ್ನ ಸಹೋದ್ಯೋಗಿಗಳು, ಪತ್ರಕರ್ತ ಮಿತ್ರರೂ ವಿಷಯ ಏನೂ ಅನ್ನೋದನ್ನೇ ಅರ್ಥ ಮಾಡಿಕೊಳ್ಳದೇ “ಬಡ್ಡೀಮಗಾ, ನಾನೇ ಕ್ರೈಂ ರಿಪೋರ್ಟರ್ ಅಂತಾ ಮೆರೀತಿದ್ದ ಹೋಗಿ ಬರಲಿ ಇರೀ ಜೈಲಿಗೆ” ಅಂತೆಲ್ಲಾ ಮಾತಾಡಿಕೊಂಡ್ರಲ್ಲಾ, ಆ ಅಮಾಯಕರ ಬಗ್ಗೆ ನನಗಿದ್ದದ್ದು ಅವತ್ತಿಗೂ ಸಹಾನುಭೂತೀನೇ ಇವತ್ತೂ ಅದೇ.. ಇನ್ನು ನನ್ನ ಬೆನ್ನಿಗೆ ಅವತ್ತು ನಿಂತಿದ್ದು ಮಿಡ್ ಡೇ ಪತ್ರಿಕೆ.

ಕ್ರೈಂ ವರದಿಗಾರರ ಕಷ್ಟಗಳೇನು ಅನ್ನೋದನ್ನ ಅರ್ಥ ಮಾಡಿಕೊಂಡಿದ್ದ ಮತ್ತು ನನ್ನ  ವೃತ್ತಿಪರತೆ ಬಗ್ಗೆ ನಂಬಿಕೆ ಇದ್ದ ಹಿರಿಯರಾದ ಶಿವ ಶಂಕರ್ ಅವರು ಅವತ್ತು ಅಲ್ಲಿದ್ರು. ಅವರ ಬೆಂಬಲಕ್ಕೆ ನಾನು ಚಿರ ರುಣಿ ಇನ್ನು ಅಜ್ಞಾತವಾಸದ ಆ ಹದಿನೆಂಟೂ ದಿನ ನನ್ನ ಬೆನ್ನಿಗೆ ನಿಂತ ಗೆಳೆಯ ದೇವರಾಜ, ಧೈರ್ಯಕಳಕೊಳ್ಳದ ನನ್ನ ಕುಟುಂಬ ಪ್ರತಿಯೊಬ್ಬರಿಗೂ ನಾನು ಆಭಾರಿ. ಈಗ ಸುದೀರ್ಘ ವಿಚಾರಣೆಯ ನಂತರ ಸನ್ಮಾನ್ಯ ನ್ಯಾಯಾಧೀಷರು ನಾನೂ ಸೇರಿದ ಹಾಗೆ ಆ ಪ್ರಕರಣದ ಅಷ್ಟೂ ಆರೋಪಿಗಳನ್ನ ಅರೋಪ ಮುಕ್ತ ಗೊಳಿಸಿ ತೀರ್ಪು ನೀಡಿದ್ದಾರೆ. ಈ ದೇಶದಲ್ಲಿ ನ್ಯಾಯಕ್ಕೆ ಯಾವತ್ತೂ ಜಯ ಸಿಕ್ಕೇ ಸಿಗತ್ತೆ. ತೀರ್ಪು ಬಂದ ದಿನ ಗೆಳೆಯ ಸುರೇಶ್ ಮುಖದಲ್ಲಿನ ನೆಮ್ಮದಿ ಈಕ್ಷಣಕ್ಕೂ ನನ್ನ ಕಣ್ಣಿಗೆ ಕಟ್ಟಿದಹಾಗಿದೆ.
ಇದನ್ನ ನಿಮ್ಮ ಜೊತೆ ಹಂಚಿಕೋಬೇಕು ಅನ್ನಿಸ್ತು.. ಈಗ ಇಷ್ಟು ಸಾಕು.. ಉಳಿದದ್ದನ್ನೆಲ್ಲಾ ಆ ಮೇಲೆ ಹೇಳ್ತೀನಿ.. ಆ ಕತೆ ಖಂಡಿತಾ ನಿಮಗೆ ಇಷ್ಟವಾಗತ್ತೆ. ಬರೆಯೋದಕ್ಕೆ ಶುರು ಮಾಡಿದೀನಿ ಸ್ವಲ್ಪ ಕಾಯ್ತೀರಿ ಅಲ್ವಾ..?

Default Comments

Leave a Reply

Facebook Comments

Share This